ಗಾಜಿ ಆಂಟೆಪ್

ದಕ್ಷಿಣ ತುರ್ಕಿಯ ಒಂದು ಪ್ರಾಂತ್ಯ ಹಾಗೂ ಆ ಪ್ರಾಂತ್ಯದ ಆಡಳಿತ ಕೇಂದ್ರ. ಮೊದಲು ಇದಕ್ಕೆ ಐಂಟಾಬ್ ಎಂಬ ಹೆಸರಿತ್ತು. 1920-21ರ ಅವಧಿಯಲ್ಲಿ ಫ್ರೆಂಚರ ಆಕ್ರಮಣವನ್ನು ಪ್ರತಿಭಟಿಸಿ ನಿಂತ ಗೌರವದ ಕುರುಹಾಗಿ ಕಮಾಲ್ ಆಟಾಟುರ್ಕ್ ಈ ನಗರಕ್ಕೆ ಗಾಜಿó ಆಂಟೆಪ್ ಎಂದು ಹೊಸದಾಗಿ ನಾಮಕರಣ ಮಾಡಿದ. ಗಾಜಿó ಎಂದರೆ ಇಸ್ಕಾಂಮಿಗಾಗಿ ಹೋರಾಟಗಾರ ಎಂದು ಅರ್ಥ. ಈ ನಗರ ಟಾರಸ್ ಪರ್ವತದ ಇಳಿಜಾರಿನಲ್ಲಿ ಸುಣ್ಣಕಲ್ಲಿನ ಬೆಟ್ಟದ ಮೇಲೆ ನೆಲೆಗೊಂಡಿದೆ. ಮೊದಲು ಇಲ್ಲಿ ಆರ್ಮೇನಿಯನರೇ ಬಹುಸಂಖ್ಯಾತರಾಗಿದ್ದರೂ ಈಗ ತುರ್ಕೊಮನ್ ಮತ್ತು ಕುರ್ದಿ ಜನಾಂಗಗಳವರೂ ವಿಶೇಷವಾಗಿದ್ದಾರೆ. ನಗರದ ಜನಸಂಖ್ಯೆ 1,25,498 (1960).

ಇತಿಹಾಸಪೂರ್ವ ಕಾಲದಿಂದಲೂ ಈ ನಗರ ಜನಭರಿತವಾಗಿದ್ದುದಾಗಿ ತಿಳಿದು ಬಂದಿದೆ. ಹಿಟ್ಟೈಟರ ಕಾಲದಲ್ಲಿ ಈ ನಗರಕ್ಕೆ ಯಾವ ಹೆಸರಿತ್ತೆಂಬುದು ಖಚಿತವಾಗಿ ತಿಳಿದಿಲ್ಲವಾದರೂ ಇದು ತುಂಬ ಮಹತ್ವದ ನಗರವಾಗಿದ್ದಿರಬೇಕೆಂಬುದರಲ್ಲಿ ಸಂದೇಹವಿಲ್ಲ. ಇದಕ್ಕೆ ಕಾರಣ ಇದರ ಭೌಗೋಳಿಕ ನೆಲೆ. ಮಧ್ಯಯುಗದಲ್ಲೂ ಇದು ಪ್ರಮುಖ ಸೈನಿಕನೆಲೆಯಾಗಿತ್ತು. 1183ರಲ್ಲಿ ಸಲಾದೀನ್ ಈ ನಗರವನ್ನು ಆಕ್ರಮಿಸಿಕೊಂಡಿದ್ದ. 1516ರಲ್ಲಿ ಇದು ಆಟೊಮನ್ ಚಕ್ರಾಧಿಪತ್ಯದ ಒಂದು ಭಾಗವಾಗಿತ್ತು. 19ನೆಯ ಶತಮಾನದ ಆದಿಭಾಗದಲ್ಲಿ ಇಬ್ರಾಹಿಂ ಪಾಷ ಇದನ್ನು ತನ್ನ ಸೈನಿಕನೆಲೆಯಾಗಿಸಿಕೊಂಡು, ಆಟೊಮನ್ ದಳಗಳ ಮೇಲೆ ವಿಜಯ ಸಾಧಿಸಿದ. 1920-21ರ ನಡುವೆ ಇದು ಹತ್ತು ತಿಂಗಳುಗಳ ಕಾಲ ಫ್ರೆಂಚರ ಆಕ್ರಮಣವನ್ನು ಯಶಸ್ವಿಯಾಗಿ ತಡೆದಿತ್ತು. ಈ ಕಾರಣದಿಂದಾಗಿಯೇ ಇದಕ್ಕೆ ಗಾಜಿó ಆಂಟೆಪ್ ಎಂದು ಮರು ನಾಮಕರಣವಾದ್ದು. ಕೊನೆಗೆ ಇದು ಫ್ರೆಂಚರ ಕೈವಶವಾಯಿತು. ಆದರೆ, 1922ರಲ್ಲಿ ಮತ್ತೆ ಇದನ್ನು ತುರ್ಕಿಗೆ ಒಪ್ಪಿಸಿಕೊಡಲಾಯಿತು. ಜ್ಯೂಪಿಟರ್ ದೊಲಿಚೆನಸ್ಸನ ಪ್ರಸಿದ್ಧ ದೇವಾಲಯವಿದ್ದ ದುಲುಕ್ (ದೊಲಿಚೆ ಎಂಬುದು ಪ್ರಾಚೀನ ಹೆಸರು) ನಗರದ ನಿವೇಶನ ಈ ನಗರದ ವಾಯವ್ಯಕ್ಕೆ ಕೆಲವೇ ಮೈಲಿಗಳ ದೂರದಲ್ಲಿದೆ. ಅಲ್ಲಿಗೂ ಈ ನಗರಕ್ಕೂ ರೈಲುಸಂಪರ್ಕವುಂಟು. ದುಲುಕ್‍ನಲ್ಲಿ ಗಮನಾರ್ಹವಾದ ಅನೇಕ ಪ್ರಾಚೀನ ಸಮಾಧಿಗಳು ದೊರೆತಿವೆ. ಇದರಿಂದಾಗಿ ಗಾಜಿ ಆಂಟೆಪ್‍ನ ಮಹತ್ತ್ವ ಹೆಚ್ಚಿದೆ.

ತುರ್ಕಿ ರಾಷ್ಟ್ರೀಯ ರೈಲ್ವೆ ಜಾಲ ಈ ನಗರಕ್ಕೂ ಇತರ ನಗರಗಳಿಗೂ ಸಂಪರ್ಕ ಕಲ್ಪಿಸಿದೆ. ಸರ್ವಋತು ಭೂಮಾರ್ಗಗಳೂ ಉಂಟು. ಈ ನಗರದ ಸುತ್ತ ದ್ರಾಕ್ಷಿಯ ತೋಟಗಳು, ಪಿಸ್ತಾಶಿಯೋ ಮತ್ತು ಆಲಿವ್ ತೋಪುಗಳು ಉಂಟು. ಇದು ಈ ಪ್ರಾಂತ್ಯದ ಪ್ರಮುಖ ವ್ಯಾಪಾರ ಕೇಂದ್ರ. ಇಲ್ಲಿ ವೈದ್ಯಕೀಯ ಶಾಲೆಯನ್ನೊಳಗೊಂಡಿರುವ ಅಮೆರಿಕನ್ ಮಿಷನ್ ಕಾಲೇಜು ಮತ್ತು ಬಾಲಿಕೆಯರ ಶಾಲೆ ಇವೆ. ಒಂದು ಹವಾ ವೀಕ್ಷಣಾಲಯವೂ ಉಂಟು. ಉತ್ತಮ ದರ್ಜೆಯ ಹತ್ತಿ ಬಟ್ಟೆಗಳು, ಮೇಕೆಯ ಕೂದಲಿನ ಗುಡಾರದ ಬಟ್ಟೆಗಳು, ಮೇಕೆ ಚರ್ಮದ ವಸ್ತುಗಳು, ಹೊಗೆ ಸೊಪ್ಪು, ಸಾಬೂನು, ಕಚ್ಚಾ ಹತ್ತಿ ಮತ್ತು ಹತ್ತಿ ನೂಲು, ಬಣ್ಣಗಳು, ದ್ರಾಕ್ಷಾ ಪಾಕ- ಇವು ಇಲ್ಲಿಯ ಮುಖ್ಯ ವ್ಯಾಪಾರ ಸರಕುಗಳು.

ಗಾಜಿó ಆಂಟೆಪ್ ಪ್ರಾಂತ್ಯದ ವಿಸ್ತೀರ್ಣ 3,011 ಚ. ಮೈ. ಜನಸಂಖ್ಯೆ 4,38,477 (1960). ಯುಫ್ರೇಟೀಸ್ ಇದರ ಪೂರ್ವಕ್ಕಿದೆ. ಈ ಪ್ರಾಂತ್ಯದ ಮೇಲ್ನಾಡಿನಲ್ಲಿ ಕುರಿಗಳನ್ನೂ ಮೇಕೆಗಳನ್ನೂ ಸಾಕುತ್ತಾರೆ. ಹತ್ತಿ, ತಂಬಾಕು, ದ್ವಿದಳ ಧಾನ್ಯ ಇಲ್ಲಿಯ ಮುಖ್ಯ ಬೆಳೆಗಳು. ಮೇಕೆಗಳು ಚರ್ಮದ ರಗ್ಗುಗಳಿಗೂ ಹಲವು ಬಗೆಯ ಮದ್ಯಗಳಿಗೂ ಬಕ್ಲಾವಾ, ಪೆಕ್ಮೇಜ್ ಮೊದಲಾದ ಖಾದ್ಯವಸ್ತುಗಳಿಗೂ ಈ ಪ್ರಾಂತ್ಯ ಹೆಸರಾಗಿದೆ. ಈ ಪ್ರಾಂತ್ಯ ತುರ್ಕಿಯ ಅಶ್ವದಳಕ್ಕೆ ಕುದುರೆಗಳನ್ನು ಒದಗಿಸುತ್ತದೆ.													(ಪಿ.ಜಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ